ಚಪಾತಿ ಹೇಗಿರಬೇಕು ಎಂದರೆ "ಚಪಾತಿ ಮನೆಯ ಚಪಾತಿಯಹಾಗೆ" !
ಬಹಳ ಹಿಂದಿನ ಕಥೆಯಲ್ಲ, ಕೇವಲ ಹನ್ನೆರಡು ವರ್ಷಗಳ ಹಿಂದೆ ವರ್ಷಗಳ ಹಿಂದಿನ ಘಟನೆಯಿದು; ಜೀವನ ರಂಗದಲ್ಲಿ ಲೋಕಲ್ ಟ್ರಾನ್ಸ್ ಪೊರ್ಟ್ ವ್ಯವಹಾರದಲ್ಲಿ ಬದುಕು ರೂಪಿಸಿಕೊಳ್ಳುತ್ತ ನಾಲ್ಕು ಲಾರಿಗಳ ಮಾಲೀಕರಾಗಿದ್ದ ಲಕ್ಷ್ಮಣರಾಯರಿಗೆ ಕಾರಣಾಂತರಗಳಿಂದ ವ್ಯಾವಹಾರಿಕವಾಗಿ ಬಹಳ ನಷ್ಟ ಸಂಭವಿಸಿತು. ಬದುಕಿಗಾಗಿ ಇನ್ನೊಂದುಯ್ ಉದ್ಯಮವನ್ನಾದರೂ ಮಾಡಬೇಕೆಂಬ ಆಲೋಚನೆಯಂತೂ ಮನದಲ್ಲಿತ್ತು-ಆದಎ ಯಾವುದೆಂದು ನಿರ್ಧಾರವಾಗಿರಲಿಲ್ಲ. ಮಗುವಿಗೆ ಜನ್ಮ ಸಮಯದಲ್ಲಿ ಬಿದ್ದ ಹೊಡೆತದಿಂದ ಎಡಭುಜದಲ್ಲಿ ಅಸಾಧ್ಯ ನೋವಿತ್ತು. ನೋವಿನಿಂಂದ ಒದ್ದಾಡುತ್ತಿದ್ದ ಮಗುವಿಗೆ ತಾತ್ಕಾಲಿಕ ಉಪಶಮನಗೌ ನಡೆದರೂ ಶಾಶ್ವತ ಪರಿಹಾರವನ್ನು ಕೊಡಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ದೊಡ್ಡಾಸ್ಪತ್ರೆಗೆ ಕರೆತಂದಿದ್ದರು; ಆಸ್ಪತ್ರೆಯ ಖರ್ಚಿಗೂ ಸಹ ಅವರಲ್ಲಿ ಹಣವಿರಲಿಲ್ಲ, ಸಂಸಾರದ ಬಂಡಿಗೂ ಹಣವಿರಲಿಲ್ಲ. ಬೆಂಗಳೂರಿಗೆ ಬಂದಿದ್ದಂತೂ ಆಯ್ತು-ಮರಳಿ ಹೋಗಲು ದುಡ್ಡಿಲ್ಲದಷ್ಟು ಆಪತ್ತು!
ಬೆಂಗಳೂರಿನಲ್ಲಿ ಅನೇಕ ಜನ, ವಿಭಿನ್ನ ಕ್ಷೇತ್ರಗಳಲ್ಲಿ ದುಡಿದು, ತಮ್ಮ ಜೀವನರಥವನ್ನು ನಡೆಸುತ್ತಾರೆಂಬುದನ್ನ ಬಲ್ಲ ಅವರಿಗೆ ಇಲ್ಲೇ ತಾನೇಕೆ ಯಾವುದಾದರೂ ಕೆಲಸ ಮಾಡಬಾರದು ಎನಿಸಿತು. ಆಂಗ್ಲ ಭಾಷೆ ಸ್ಪಷ್ಟವಾಗಿ ಬಾರದ್ದರಿಂದ ಯಾವ ಕೆಲಸವನ್ನು ಮಾಡುವುದು ಎಂಬ ಸಮಸ್ಯೆಯೂ ಎದುರಾಯ್ತು. ಏರುಯೌವ್ವನದಲ್ಲಿಯೇ ಲಾರಿಗಳ ಮಾಲೀಕರಾಗಿದ್ದ ಅವರಿಗೆ ಇನ್ನೊಬ್ಬರಲ್ಲಿ ಕೆಲಸ ಬೇಡಲು ನಾಚಿಕೆ ಎನಿಸಿತು. ಪತ್ನಿಯೊಂದಿಗೆ ಇನ್ನೇನು ಊರಿಗೆ ಮರಳಿ ಹೋಗಬೇಕೆನ್ನುವ ಹಂತದಲ್ಲಿ ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ಪರಿಚಿತವಾದ ವ್ಯಾಪಾರೀ ಮಹಿಳೆಯೋರ್ವರು ಸಮಾಧಾನ ಹೇಳಿದರು. "ಶಿವ-ಪಾರ್ವತಿಯರ ಹಾಗೆ ಬಂದಿದ್ದೀರಿ, ಜೀವನಕ್ಕೆ ಆಧಾರ ಹುಡುಕುತ್ತ ಬೇಜಾರಾಗಿ ಮರಳಿ ಹೋಗಬೇಡಿ, ಚಪಾತಿಗಳನ್ನು ತಯಾರಿಸಿ ಹೋಟೆಲ್‍ಗಳಿಗೆ ನೀಡಿ,ಅದರಿಂದ ನಿಮಗೆ ಅನುಕೂಲವಾಗುತ್ತದೆ" ಎಂದು ಸಲಹೆ ನೀಡಿದರು. ಆ ಮಾತನ್ನೇ ಧನಾತ್ಮಕವಾಗಿ ಸ್ವೀಕರಿಸಿದ ಈ ದಂಪತಿ ಅಲ್ಲಿಂದೀಚೆಗೆ ಮಲೆನಾಡಿಗೆ ಮರಳುವ ಯೋಚನೆ ಕೈಬಿಟ್ಟು, ಆರಂಭಿಕ ಹಂತದಲ್ಲಿ ಎದುರಾದ ಎಲ್ಲಾ ಸಮಸ್ಯೆಗಳಿಗೆ ಉತ್ತರದಾಯಿತ್ವ ಇಟ್ಟುಕೊಂಡು ಚಪಾತಿ ಮಾಡಲಾರಂಭಿಸಿದರು. ಜ್ಯೋತಿಷ್ಯ ಹೇಳುತ್ತಿದ್ದ ಶ್ರೀಪಾದ ಭಟ್ಟರೂ ಸಹ "ನಿಮಗೆ ಚಪಾತಿ ವ್ಯವಹಾರದಿಂದ ಅಭಿವೃದ್ಧಿಯಾಗುತ್ತದೆ, ಧೈರ್ಯದಿಂದ ಮುನ್ನಡೆಸಿ" ಎಂದು ಹೇಳಿದರು.
ಮಲೆನಾಡಿನ ಸುಂದರ ವಾತಾವರಣದಿಂದ ಕಾಂಕ್ರೀಟ್ ಕಾಡಾದ ಬೆಂಗಳೂರಿಗೆ ಬಂದು ನೆಲೆಸಿದ ದಂಪತಿಗೆ ಆರಂಭದ ದಿನಗಳು ಸುಲಭವೇನೂಒ ಆಗಿರಲಿಲ್ಲ. ಮಕ್ಕಳು ಚಿಕ್ಕವರು-ಅವರ ಆರೋಗ್ಯ, ವಿದ್ಯೆ, ಅನುಪಾನಗಳನ್ನು ನೋಡಿಕೊಳ್ಳಬೇಕು. ಜೊತೆಗೆ ಉದರಂಭರಣೆಗೆ ಚಪಾತಿ ತಯಾರಿಸುವ ಕೈಂಕರ್ಯ ನಡೆಸಬೇಕು. ಚಪಾತಿ ತಯಾರಿಸಿದರೆ ಮುಗಿಯಿತೇ? ಅದನ್ನು ಮಾರಾಟ ಮಾಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಒಟ್ಟಿಗೇ ಖರೀದಿಸುವ ಹೊಸಹೊಸ ಗಿರಾಕಿಗಳನ್ನು ಹುಡುಕಬೇಕು. ಗಂಡ-ಹೆಂಡಿರಲ್ಲಿ ಗಂಡ ಕಚ್ಚಾಸಾಮಾಗ್ರಿಗಳನ್ನು ಪೂರೈಸುತ್ತ, ಅಷ್ಟಿಷ್ಟು ಕೆಲಸ ಮಾಡಿಕೊಡುತ್ತ ಗಿರಾಕಿಗಳನ್ನು ಹುಡುಕುವ ಕೆಲಸವನ್ನೂ ಮಾಡಿದರು. ಲಕ್ಷ್ಮಣ ರಾಯರ ಪತ್ನಿ ಲಕ್ಷ್ಮೀದೇವಿಯವರು ಪತಿಯ ಜೊತೆಗೆ ಪ್ರತಿನಿತ್ಯ ಬೆಳಗಿನ ಜಾವ ಮೂರು-ನಾಲ್ಕು ಗಂಟೆಗೇ ಎದ್ದು ಚಪಾತಿ, ಪಲ್ಯ ಮಾಡಲು ಆರಂಭಿಸಿದರು. ಅವರಿದ್ದ ಮನೆಯ ಸುತ್ತಲ ಜನ ಚಪಾತಿಯ ಜೊತೆಗೆ ಬೆಳಿಗ್ಗೆ ತಿನ್ನಬಹುದಾದ ಕೆಲವು ತಿಂಡಿಗಳನ್ನೂ ಕೇಳ ತೊಡಗಿದರು. ಹೀಗಾಗಿ ಇರುವ ಇಬ್ಬರಿಗೆ ಮೈಮುರಿಯುವಷ್ಟು ಕೆಲಸಗಳ ಒತ್ತಡವಿತ್ತು. ವಿಶ್ರಾಂತಿಯ ಬಗೆಗೆ ತಲೆ ಕೆಡಿಸಿಕೊಳ್ಳದೇ ಶ್ರಮಪಟ್ಟರು. ಚಪಾತಿಗೆ ಸಮರ್ಪಕ ಮಾರುಕಟ್ಟೆ ಲಭಿಸಿದಾಗ ಕೆಲಸಗಳ ಒತ್ತಡ ನಿವಾರಣೆಗೆ ಒಬ್ಬೊಬ್ಬರೇ ಸಹಾಯಕರನ್ನು ತೆಗೆದುಕೊಳ್ಳುತ್ತ ಹೋದರು.
ಚಪಾತಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಮಾರಾಟವಾದರೆ ಮಾತ್ರ ಜೀವನೋಪಾಯ ಸಾಧ್ಯವಿತ್ತು. ಹೀಗಾಗಿ ಆರಂಭದ ದಿನಗಳಲ್ಲಿ ಸರಿಸುಮಾರು ಐದುನೂರು ಹೋಟೆಲ್‍ಗಳಿಗೆ ಓಡಾಡಿದ ಲಕ್ಷ್ಮಣರಾಯರು, ಅವುಗಳ ಮಾಲೀಕರಲ್ಲಿ ಆರ್ಡರ್ಽಗಳಿಗಾಗಿ ವಿನಂತಿಸುತ್ತಿದ್ದರು. ಆ ಸಮಯದಲ್ಲಿಯೇ ಹೋಟೆಲ್‍ಗಳಲ್ಲಿ ಕೆಲಸಗಾರರ ಸಂಖ್ಯೆ ಕಡಿಮೆಯಾಗುತ್ತಿತ್ತು. ಸರಿಯಾಗಿ ಕೆಲಸಮಾಡುವವರು ಆಗಾಗ ಬಿಟ್ಟುಹೋಗುತ್ತಿದ್ದರು. ಊಟದ ಭಾಗವಾಗಿ ಚಪಾತಿ ನೀಡುವುದು ಬಹುತೇಕ ಎಲ್ಲಾ ಹೋಟೆಲ್‍ಗಳಲ್ಲೂ ಇತ್ತು. ಚಪಾತಿಗಳನ್ನು ತಯಾರಿಸಿ ಇಟ್ಟುಕೊಂಡರೆ ಗಟ್ಟಿಯಾಗಿ, ದೊರಗಾಗಿ ಗಿರಾಕಿಗಳಿಗೆ ಹಿಡಿಸುತ್ತಿರಲಿಲ್ಲ. ದಿನದ ಬಹಳ ಸಮಯದ ವರೆಗೆ ಮೆತ್ತಗಿರುವ ಚಪಾತಿಯನ್ನು ಒಂದೇ ಆಕಾರ ಮತ್ತು ಗುಣಮಟ್ಟದಲ್ಲಿ ತಯಾರಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆ ಕೆಲಸವನ್ನು ಲಕ್ಷ್ಮಣ ರಾಯರು ವಹಿಸಿಕೊಂಡು ಬೆಂಗಳೂರಿನಾದ್ಯಂತ ಅನೇಕ ಹೋಟೆಲ್‍ಗಳಿಗೆ ತಮ್ಮ ಚಪಾತಿಗಳನ್ನು ನಿತ್ಯವೂ ಪೂರೈಸತೊಡಗಿದರು.
ಹನ್ನೆರಡು ವರ್ಷಗಳು ಸಂದ ಈ ಹೊತ್ತಿನಲ್ಲಿ ಅವರನ್ನು ಮಾತನಾಡಿಸಿದಾಗ ಅಂದಿಗೂ ಇಂದಿಗೂ ಇರುವ ವ್ಯತ್ಯಾಸಗಳನ್ನು ಹೇಳಿದರು; ಆದರೆ ಅಂದಿದ್ದ ಅದೇ ನಿಗರ್ವ ಮತ್ತು ಸರಳ ವ್ಯಕ್ತಿತ್ವ ಅವರಲ್ಲಿ ಇಂದಿಗೂ ಮನೆಮಾಡಿದೆ. ಇಂದು ಅವರ ಉದ್ಯಮ ಬೆಳೆದಿದ್ದು, ಚಪಾತಿಯ ಜೊತೆಗೆ ಅಕ್ಕಿರೊಟ್ಟಿ, ಒತ್ತು ಶ್ಯಾವಿಗೆ, ಕಾಯಿ ಕಡಬು, ಬಿಸಿ ಬೇಳೆ ಬಾತ್, ವಾಂಗೀಬಾತ್, ಮೊಸರನ್ನ, ಸಿಹಿತಿನಿಸುಗಳಲ್ಲಿ ಜಿಲೇಬಿ, ಜಹಾಂಗೀರ್, ಮೈಸೂರ್ ಪಾಕ್, ಬಾದಾಮ್ ಬರ್ಫಿ, ಹಾರ್ಲಿಕ್ಸ್ ಬರ್ಫಿ, ಹಾಲುಬಾಯಿ, ಮೋಹನ್ ಲಾಡು, ಬೂಂದಿ ಲಾಡು, ರವಾ ಉಂಡೆ, ಅಂತೆಯೇ ಕರಿದ ತಿನಿಸುಗಳಲ್ಲಿ ಚಕ್ಕುಲಿ, ಬೆಣ್ಣೆಚಕ್ಕುಲಿ, ಕೋಡುಬಳೆ, ಪಕೋಡ, ಬಜ್ಜಿ, ಅಂಬಡೆ ಮತ್ತು ಇನ್ನಿತರ ಎಲ್ಲಾ ವಿಧದ ಕಾಂಡಿಮೆಂಟ್ಸ್ ಖಾದ್ಯಗಳನ್ನು ತಯಾರಿಸಿ ಮಾರಾಟಮಾಡುತ್ತಿದ್ದಾರೆ. ಆಧಾರವಿಲ್ಲದಿದ್ದ ತಮಗೆ ಆಧಾರ ಕಲ್ಪಿಸಿಕೊಳ್ಳುವುದರ ಜೊತೆಗೆ ಇತರ ಕೆಲವರಿಗೂ ಜೀವನಾಧಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ವ್ಯವಹಾರವನ್ನು ಬೆಳೆಸುತ್ತ ನಡೆದು, ಕೆಲವು ವರ್ಷಗಳಿಂದ ಹೊರಾಂಗಣ ಅಡುಗೆ[ಔಟ್‍ಡೋರ್ ಕ್ಯಾಟರಿಂಗ್]ಗುತ್ತಿಗೆಯನ್ನೂ ಸಹ ತೆಗೆದುಕೊಳ್ಳುತ್ತಿದ್ದಾರೆ.
ಏನೂ ಇಲ್ಲದೇ ಇದ್ದಾಗ ಏನಾದರೂ ಸಾಧಿಸಬೇಕೆಂಬ ಆತ್ಮವಿಶ್ವಾಸ, ಶ್ರಮದ ಕೆಲಸಕ್ಕೆ ಒಗ್ಗಿಕೊಳ್ಳುವ ಮನೋಭಾವ, ಪ್ರಾಮಾಣಿಕತೆ, ಗುಣಮಟ್ಟದ ತಯಾರಿಕೆ ಇವಿಷ್ಟು ನಮಗೆ ಮುಖ್ಯ ಬಂಡವಾಳವಾಗಿದ್ದವು. ಜೊತೆಗೆ ಆರಂಭಿಕ ಹಂತದಲ್ಲಿ ತಾವಿದ್ದ ಬಾಡಿಗೆ ಕಟ್ಟಡದ ಮಾಲೀಕರ ಸಹಕಾರ, ಹತ್ತಿರದ ನೆಂಟರಲ್ಲಿ ಕೆಲವರ ಸಹಕಾರ, ಜ್ಯೋತಿಷಿ ಶ್ರೀಪಾದ ಭಟ್, ಭಾಷ್ಯಂ ಸರ್ಕಲ್‍ನಲ್ಲಿ ಸಲಹೆ ನೀಡಿದ ಮಹಿಳೆ, ಚಪಾತಿಯ ಹದ ಸರಿಪಡಿಸಲು ಕಲಿಸಿಕೊಟ್ಟ ಗೆಳೆಯರ ಬಳಗದ ಒಬ್ಬ ವೃದ್ಧ ಮಹಿಳೆ ಮತ್ತು ಕಾರ್ಮಿಕರ ಸಹಕಾರವನ್ನು ಈ ದಂಪತಿ ಸ್ಮರಿಸಲು ಮರೆಯುವುದಿಲ್ಲ.
ಇಂದು "ಚಪಾತಿ ಮನೆ" ಎಂದರೆ ಬೆಂಗಳೂರಿನಲ್ಲಷ್ಟೇ ಅಲ್ಲ, ಬೆಂಗಳೂರಿನಲ್ಲಿರುವ ಹಲವರ ಮೂಲಕ ಹಳ್ಳಿಗಳವರೆಗೂ ಇವರ ಖ್ಯಾತಿ ಜನಜನಿತ. ಚಪಾತಿ ಹೇಗಿರಬೇಕು ಎಂದರೆ "ಚಪಾತಿ ಮನೆಯ ಚಪಾತಿಯ ಹಾಗೆ" ಎಂಬಷ್ಟು ಹೆಸರು ಮಾಡಿದ್ದಾರೆ. ಚಪಾತಿ ಮನೆಯ ವಿಳಾಸ ಮತ್ತು ಚರದೂರವಾಣಿಗಳು ಇಂತಿವೆ:
ಚಪಾತಿ ಮನೆ, # 141, ಮೂರನೇ ಅಡ್ಡರಸ್ತೆ, ಎ ಜಿ ಬಿ ಲೇಔಟ್, ಮಹಾಲಕ್ಷ್ಮಿಪುರಂ, ಬೆಂಗಳೂರು-560086
ಚರ ದೂರವಾಣಿ : 9243478860, 9243124789
ಭಟ್ ಹೋಳಿಗೆ
’ಮೈಸೂರು ಮಲ್ಲಿಗೆ’ಯ ಪ್ರಸಿದ್ಧ ಕವಿ ದಿ. ಕೆ.ಎಸ್.ನರಸಿಂಹ ಸ್ವಾಮಿಯವರು ಬರೆಯುತ್ತಾರೆ:
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ.
ಅದೊಂದು ಕಾಲಘಟ್ಟದಲ್ಲಿ ಮನೆಮನೆಗಳಲ್ಲಿ ಯಾವುದೇ ಹಬ್ಬ ಜರುಗಿದರೂ ಸಾಮಾನ್ಯವಾಗಿ ಹೋಳಿಗೆಯನ್ನು/ಒಬ್ಬಟ್ಟನ್ನು ತಯಾರಿಸಲಾಗುತ್ತಿತ್ತು. ಅಧುನಿಕ ಕಾಲಮಾನದಲ್ಲಿ ಬಹುತೇಕ ನಗರವಾಸಿಗಳ ಮನೆಗಳಲ್ಲಿ ಗಂಡನಂತೆ ಹೆಂಡತಿಯೂ ಹೊರಗಡೆ ಕಚೇರಿಯ ಕೆಲಸಗಳಿಗೆ ಹೋಗುವುದರಿಂದ ಇಂದು ಬೇಕೆನಿಸಿದಾಗಲೆಲ್ಲಾ ಹೋಳಿಗೆಗಳನ್ನು ತಯಾರಿಸಿಕೊಳ್ಳಲು ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಸಮಯದ ಅಭಾವ, ಕೆಲಸಗಳ ಒತ್ತಡ, ಅಗತ್ಯ ಸಾಮಗ್ರಿಗಳು ಸಮಯದಲ್ಲಿ ಒದಗದೇ ಇರುವುದು, ದೈಹಿಕ ಅಶಕ್ತಕೆ, ಮೂಡ್ ಇಲ್ಲದಿರುವಿಕೆ ಇವೆಲ್ಲ ಕಾರಣಗಳಿಂದ ಇಂದು ಹೋಳಿಗೆಯಂತಹ ತಿನಿಸುಗಳನ್ನು ಮನೆಗಳಲ್ಲಿ ತಯಾರಿಸಿಕೊಳ್ಳಲಾಗದವರು ’ಭಟ್ ಹೋಳಿಗೆ’ಗೆ ಮೊರೆಹೋಗುತ್ತಾರೆ.
ಕೇವಲ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಸಿದ್ಧಗೊಳ್ಳುತಿದ್ದ ಹೋಳಿಗೆಗೆ ಪ್ರಥಮವಾಗಿ ಕೈಗಾರಿಕೋದ್ಯಮದ ಆಯಾಮ ಕೊಟ್ಟವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಶ್ರೀನಿವಾಸ್ ಅವರು. ಮೈಸೂರು ಲ್ಯಾಂಪ್ ಉದ್ಯೋಗಿಯಾಗಿದ್ದ ಶ್ರೀನಿವಾಸ್ ಅವರಿಗೆ ಆ ಕಾರ್ಖಾನೆ ಮುಚ್ಚಿದಮೇಲೆ ಉದ್ಯೋಗಕ್ಕಾಗಿ ಬೇರೆ ಇಂಡಸ್ಟ್ರಿಗಳಿಗೆ ಅಲೆದಾಡುವ ಮನಸ್ಸಿರಲಿಲ್ಲ. ಹೋಳಿಗೆ, ಕಜ್ಜಾಯ, ಕರಜೀಕಾಯಿ ಮೊದಲಾದ ತಿನಿಸುಗಳಲ್ಲಿ ನೈಪುಣ್ಯತೆ ಹೊಂದಿದ್ದ ಅವರು ತಾನೇಕೆ ಅಂಥದ್ದನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಬಾರದು? ಎಂಬ ಆಲೋಚನೆ ಹುಟ್ಟಿತು. ಅದರ ಫಲವಾಗಿ ಆರಂಭಗೊಂಡಿದ್ದೇ ಭಟ್ ಹೋಳಿಗೆ ಮನೆ. ಶುಚಿರುಚಿಯಾಗಿ, ಆಯ್ದ ಉತ್ತಮ ಸಾಮಗ್ರಿಗಳನ್ನಷ್ಟೇ ಬಳಸಿ, ಮನೆಯಲ್ಲಿ ಅಮ್ಮ ತಯಾರಿಸುವಷ್ಟೇ ಕಾಳಜಿಯಿಂದ ಹೋಳಿಗೆಯಂತಹ ತಿನಿಸುಗಳನ್ನು ತಯಾರಿಸ ಹತ್ತಿದರು. ಆರಂಭದ ದಿನಗಳಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ನಿರ್ವಹಿಸಬೇಕಾದ ಪ್ರಮೇಯವಿತ್ತು; ಯಾಕೆಂದರೆ ಹೋಳಿಗೆ ಎಂಬುದು ಮಾರುಕಟ್ಟೆಯಲ್ಲಿ ದೊರೆಯುತ್ತದೆಂದು ಯಾರಿಗೂ ತಿಳಿದಿರಲಿಲ್ಲ. ತಯಾರಿಸುವುದನ್ನಂತೂ ಹೇಗೋ ಮಾಡಬಹುದು, ಆದರೆ ಮಾರುಕಟ್ಟೆಯಲ್ಲಿ ಹೇಗೆ ಎಲ್ಲೆಡೆಗೆ ತಲ್ಪಿಸುವುದು, ಹೇಗೆ ಮಾರುವುದು ಎಂಬುದು ಅವರಿಗಿದ್ದ ಸಮಸ್ಯೆ. ಸಿಹಿತಿನಿಸುಗಳನ್ನು ಮಾರುವ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸ್ವೀಟ್ ಮಳಿಗೆಗಳವರು ಹೋಳಿಗೆಯನ್ನು ಮಾರಾಟಮಾಡುವುದಕ್ಕೆ ತೀರಾ ಮನಸ್ಸು ಮಾಡುತ್ತಿರಲಿಲ್ಲ. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಬೆಂಗಳೂರು ಮಹಾನಗರದ ಹಲವು ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗಳನ್ನು ಸುತ್ತಿ ಹಲವು ಅಂಗಡಿಗಳನ್ನು ಏಜೆಂಟರಾಗುವಂತೆ ಕೇಳಿಕೊಂಡರು. ನಿರಂತರ ನಡೆದ ಈ ಅಭಿಯಾನಕ್ಕೆ ತಕ್ಕಮಟ್ಟಿಗೆ ಫಲಶ್ರುತಿ ದೊರೆಯತೊಡಗಿದಾಗ ಆತ್ಮವಿಶ್ವಾಸ ಹೆಚ್ಚಿತು. ಇದೇ ವೃತ್ತಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಅವರು ಇಂದು ಹಲವಾರು ಕೈಗಳಿಗೆ ಕೆಲಸ ನೀಡಿದ್ದಾರೆ.
ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಸಕ್ಕರೆಯ ಬದಲಿಗೆ ಪರಿಶುದ್ಧ ಬೆಲ್ಲ, ಉತ್ತಮ ತೆಂಗಿನಕಾಯಿ, ಬೇಳೆ, ಶೇಂಗಾ, ಖರ್ಜೂರ ಮೊದಲಾದವುಗಳನ್ನು ಬಳಸಿ ಹೋಳಿಗೆಯನ್ನು ತಯಾರಿಸುತ್ತಾರೆ. ’ಭಟ್ ಹೋಳಿಗೆಮನೆ’ಯಲ್ಲಿ ತಯಾರಾಗುವ ಕಜ್ಜಾಯಗಳೂ ಕೂಡ ವಿಶಿಷ್ಟವಾಗಿಯೇ ಇರುತ್ತವೆ. ಒಮ್ಮೆ ’ಭಟ್ ಹೋಳಿಗೆಮನೆ’ಯ ಗ್ರಾಹಕರೊಬ್ಬರ ಮನೆಗೆ ಮುಂಬೈನಿಂದ ನೆಂಟರೊಬ್ಬರು ಬಂದಿದ್ದರಂತೆ; ಮನೆಯಲ್ಲಿ ತಯಾರಿಸಿದ ಸಿಹಿ ತಿನಿಸುಗಳ ಜೊತೆಗೆ ಅವರು ಭಟ್ ಹೋಳಿಗೆಮನೆಯ ಹೋಳಿಗೆಗಳನ್ನೂ ಬಡಿಸಿದರು. ಕಾಯಿ ಹೋಳಿಗೆಯ ರಸದೌತಣವನ್ನು ಮೆದ್ದು ಆನಂದತುಂದಿಲರಾದ ಆ ಅತಿಥಿ ಈಗಲೂ ಮುಂಬೈಗೆ ಹೋಳಿಗೆ ಕಳಿಸುವಂತೆ ಬುಲಾವ್ ಮಾಡುತ್ತಾರಂತೆ.
ಅಂದಹಾಗೆ ಆಗಾಗ ಟಿವಿ ಅಡುಗೆ ಶೋಗಳಲ್ಲಿ ಅನೇಕ ಹೆಂಗಸರು ಹೋಳಿಗೆ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಅವರೆಲ್ಲರ ಹೋಳಿಗೆಯನ್ನು ತಿಂದ ಮೇಲೆ ಭಟ್ ಹೋಳಿಗೆಮನೆಯ ಹೋಳಿಗೆಯನ್ನೂ ಒಮ್ಮೆ ತಿಂದು ನೋಡಿ. ಶ್ರೀನಿವಾಸ್ ಅವರ ಹದಪಾಕದ ಹೋಳಿಗೆಯ ರುಚಿ ಅದ್ಭುತ. ಪರೀಕ್ಷಾರ್ಥವಾಗಿ ನಾವು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಯಾರ್‍ಯಾರೋ ತಯಾರಿಸುವ ಹೋಳಿಗೆಗಳನ್ನು ಖರೀದಿಸಿ ರುಚಿ ನೋಡಿದ್ದೇವೆ. ಕೆಲವು ಹೈಜೀನಿಕ್ ಆಗಿರದಿದ್ದರೆ ಇನ್ನು ಕೆಲವು ಸಪ್ಪೆ ಸಪ್ಪೆ, ಕೆಲವು ಹಿಟ್ಟಿನ ವಾಸನೆಯಾದರೆ ಇನ್ನೂ ಕೆಲವು ಸರಿಯಾಗಿ ಬೆಂದಿರುವುದಿಲ್ಲ. ಭಟ್ ಹೋಳಿಗೆಯ ಮನೆಯಲ್ಲಿ ಹೋಳಿಗೆ ತಯಾರಾಗುವ ಪ್ರತೀ ಹಂತದಲ್ಲೂ ಅದಕ್ಕೆ ನಿಗದಿತ ಸಮಯ ಮತ್ತು ಸಂಸ್ಕರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಯಾವೊಂದು ಹೋಳಿಗೆಯೂ ಅರ್ಧ ಬೆಂದ ಸ್ಥಿತಿಯಲ್ಲೋ ಅಥವಾ ಕಳಪೆ ಗುಣಮಟ್ಟದಿಂದಲೋ ಬಾಧಿತವಾಗಿರುವುದಿಲ್ಲ. ಆಯಾಯ ದಿನಗಳಂದೇ ಫ್ರೆಶ್ ಆಗಿ ಮಾರುಕಟ್ಟೆಗೆ ತಲ್ಪಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸುವ ಶ್ರೀನಿವಾಸ್ ಅವರು, ತಮ್ಮ ತಯಾರಿಕೆಯ ಯಾವುದೇ ತಿನಿಸುಗಳಿಗೆ, ಅನೇಕ ದಿನಗಳ ವರೆಗೆ ಕೆಡದಂತೆ ಸಂರಕ್ಷಿಸಲು ಬಳಸುವ ಯಾವುದೇ ರಾಸಾಯನಿಕಗಳನ್ನೂ ಸಹ ಉಪಯೋಗಿಸುವುದಿಲ್ಲ. "ಇಂದೇ ಡ್ರಾ ಇಂದೇ ಬಹುಮಾನ" ಎಂಬಂತೆ ಅವತ್ತಿನ ದಿನದ ತಯಾರಿಕೆ ಅವತ್ತೇ ಮಾರುಕಟ್ಟೆಯನ್ನು ತಲ್ಪುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.
ಹೋಳಿಗೆಯನ್ನು ಕೇವಲ ಯುಗಾದಿಗೊಮ್ಮೆ ನೆನಪಿಸಿಕೊಳ್ಳುತ್ತಿದ್ದ ಅನೇಕರು ಇಂದು ವೀಕೆಂಡ್‍ಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ, ಬಫೆಗಳಿಗೆ, ನಾಮಕರಣ-ಬರ್ತ್ ಡೇ ಮೊದಲಾದ ಕಾರ್ಯಕ್ರಮಗಳಿಗೆ ಭಟ್ ಹೋಳಿಗೆಯ ಮೊರೆ ಹೋಗುತ್ತಿರುವುದನ್ನು ಗಮನಿಸಿದರೆ ಹೋಳಿಗೆಯ ರುಚಿ ಹತ್ತಿಸುವ ಕಲೆ ಶ್ರೀನಿವಾಸರಿಗೆ ಕರಗತವಾಗಿದೆ ಎನ್ನಬಹುದು. ಕಥೆ ಕೇಳುವುದರಿಂದ ನಿಮಗೆ ತಿಂದಷ್ಟು ಮಜಾ ಸಿಗುವುದೇ? ರುಚಿ ಎಂಬುದನ್ನು ಕೇವಲ ಅಕ್ಷರಗಳಲ್ಲಿ ಎಷ್ಟೆಂದು ಬಣ್ಣಿಸಲಾದೀತು? ಇದನ್ನು ನೇರಾ ನೇರ ಅನುಭವಿಸಬೇಕೆಂದರೆ ಈಗಲೇ ನೀವೊಮ್ಮೆ ಭಟ್ ಹೋಳಿಗೆಯನ್ನು ತಿಂದು ನೋಡಬೇಕು. ಎಲ್ಲದಕ್ಕೂ "ಪ್ರೆಸ್ ಒನ್ ಫಾರ್ ಸೇಲ್ಸ್, ಪ್ರೆಸ್ ಠೂ ಫಾರ್ ಪ್ಲಾನ್ಸ್....ಪ್ರೆಸ್ ನೈನ್ ಟೊ ಟಾಕ್ ಟು ಅವರ್ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್’ ಎಂಬ ಕಾಲ್ ಸೆಂಟರ್ ಯುಗದಲ್ಲಿ, ನೇರವಾಗಿ ದೂರವಾಣಿಗೆ ಸಿಗುವ, ದೇಶೀಯ ಸ್ವಾದಿಷ್ಟ, ಪೌಷ್ಟಿಕ, ನೈಸರ್ಗಿಕವಾಗಿ ತಯಾರಿಸಲ್ಪಟ್ಟ ತಿನಿಸುಗಳನ್ನು ತಯಾರಿಸುವ ಶ್ರೀನಿವಾಸ್ ಅವರಂಥವರ ಕೆಲಸ ನಿಜಕ್ಕೂ ಶ್ಲಾಘ್ಯ.
ಭಟ್ ಹೋಳಿಗೆ ಮನೆಯ ಸಂಪರ್ಕ ಮತ್ತು ವಿಳಾಸ ಇಂತಿದೆ:
ಭಟ್ ಹೋಳಿಗೆಮನೆ,
# 8,.[ಹೊಸ ನಂ.27, 8ನೇ ಮುಖ್ಯರಸ್ತೆ, ಮಹಾಬಲೇಶ್ವರ ದೇವಸ್ಥಾನದ ಹತ್ತಿರ, ಗಣೇಶ ಬ್ಲಾಕ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು-560096
ಚರದೂರವಾಣಿ: 9901427992 ಸ್ಥಿರದೂರವಾಣಿ:080-23490959
ಈ ಮೇಲ್ : srinivasyadu@gmail.com
ಈ ಮೇಲ್ : srinivasyadu@gmail.com
Subscribe to:
Posts (Atom)