WELCOME TO UDDIME THIS SCROLL IS FOR AD FOR TAXES & ACCOUNTS CONSLUTATION: P.RAMDAS RAO & CO ON 9448471031

ಭಟ್ ಹೋಳಿಗೆ



’ಮೈಸೂರು ಮಲ್ಲಿಗೆ’ಯ ಪ್ರಸಿದ್ಧ ಕವಿ ದಿ. ಕೆ.ಎಸ್.ನರಸಿಂಹ ಸ್ವಾಮಿಯವರು ಬರೆಯುತ್ತಾರೆ:

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ಹುಣ್ಣಿಮೆ ಹೋಳಿಗೆ ದೀಪ
ಹೆಂಡತಿ ತವರಿಗೆ ಹೊರಡುವೆನೆಂದರೆ
ನನಗಿನ್ನಿಲ್ಲದ ಕೋಪ.


ಅದೊಂದು ಕಾಲಘಟ್ಟದಲ್ಲಿ ಮನೆಮನೆಗಳಲ್ಲಿ ಯಾವುದೇ ಹಬ್ಬ ಜರುಗಿದರೂ ಸಾಮಾನ್ಯವಾಗಿ ಹೋಳಿಗೆಯನ್ನು/ಒಬ್ಬಟ್ಟನ್ನು ತಯಾರಿಸಲಾಗುತ್ತಿತ್ತು. ಅಧುನಿಕ ಕಾಲಮಾನದಲ್ಲಿ ಬಹುತೇಕ ನಗರವಾಸಿಗಳ ಮನೆಗಳಲ್ಲಿ ಗಂಡನಂತೆ ಹೆಂಡತಿಯೂ ಹೊರಗಡೆ ಕಚೇರಿಯ ಕೆಲಸಗಳಿಗೆ ಹೋಗುವುದರಿಂದ ಇಂದು ಬೇಕೆನಿಸಿದಾಗಲೆಲ್ಲಾ ಹೋಳಿಗೆಗಳನ್ನು ತಯಾರಿಸಿಕೊಳ್ಳಲು ಸುಲಭವಾಗಿ ಸಾಧ್ಯವಾಗುತ್ತಿಲ್ಲ. ಸಮಯದ ಅಭಾವ, ಕೆಲಸಗಳ ಒತ್ತಡ, ಅಗತ್ಯ ಸಾಮಗ್ರಿಗಳು ಸಮಯದಲ್ಲಿ ಒದಗದೇ ಇರುವುದು, ದೈಹಿಕ ಅಶಕ್ತಕೆ, ಮೂಡ್ ಇಲ್ಲದಿರುವಿಕೆ ಇವೆಲ್ಲ ಕಾರಣಗಳಿಂದ ಇಂದು ಹೋಳಿಗೆಯಂತಹ ತಿನಿಸುಗಳನ್ನು ಮನೆಗಳಲ್ಲಿ ತಯಾರಿಸಿಕೊಳ್ಳಲಾಗದವರು ’ಭಟ್ ಹೋಳಿಗೆ’ಗೆ ಮೊರೆಹೋಗುತ್ತಾರೆ.


ಕೇವಲ ಮನೆಗಳಲ್ಲಿ ಸಾಂಪ್ರದಾಯಿಕವಾಗಿ ಸಿದ್ಧಗೊಳ್ಳುತಿದ್ದ ಹೋಳಿಗೆಗೆ ಪ್ರಥಮವಾಗಿ ಕೈಗಾರಿಕೋದ್ಯಮದ ಆಯಾಮ ಕೊಟ್ಟವರು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನ ಶ್ರೀನಿವಾಸ್ ಅವರು. ಮೈಸೂರು ಲ್ಯಾಂಪ್ ಉದ್ಯೋಗಿಯಾಗಿದ್ದ ಶ್ರೀನಿವಾಸ್ ಅವರಿಗೆ ಆ ಕಾರ್ಖಾನೆ ಮುಚ್ಚಿದಮೇಲೆ ಉದ್ಯೋಗಕ್ಕಾಗಿ ಬೇರೆ ಇಂಡಸ್ಟ್ರಿಗಳಿಗೆ ಅಲೆದಾಡುವ ಮನಸ್ಸಿರಲಿಲ್ಲ.  ಹೋಳಿಗೆ, ಕಜ್ಜಾಯ, ಕರಜೀಕಾಯಿ ಮೊದಲಾದ ತಿನಿಸುಗಳಲ್ಲಿ ನೈಪುಣ್ಯತೆ ಹೊಂದಿದ್ದ ಅವರು ತಾನೇಕೆ ಅಂಥದ್ದನ್ನು ಬೃಹತ್ ಪ್ರಮಾಣದಲ್ಲಿ ತಯಾರಿಸಿ ಮಾರಾಟಮಾಡಬಾರದು? ಎಂಬ ಆಲೋಚನೆ ಹುಟ್ಟಿತು. ಅದರ ಫಲವಾಗಿ ಆರಂಭಗೊಂಡಿದ್ದೇ ಭಟ್ ಹೋಳಿಗೆ ಮನೆ. ಶುಚಿರುಚಿಯಾಗಿ, ಆಯ್ದ ಉತ್ತಮ ಸಾಮಗ್ರಿಗಳನ್ನಷ್ಟೇ ಬಳಸಿ, ಮನೆಯಲ್ಲಿ ಅಮ್ಮ ತಯಾರಿಸುವಷ್ಟೇ ಕಾಳಜಿಯಿಂದ ಹೋಳಿಗೆಯಂತಹ ತಿನಿಸುಗಳನ್ನು ತಯಾರಿಸ ಹತ್ತಿದರು. ಆರಂಭದ ದಿನಗಳಲ್ಲಿ ಅತ್ಯಂತ ಪರಿಶ್ರಮದಿಂದ ಕೆಲಸ ನಿರ್ವಹಿಸಬೇಕಾದ ಪ್ರಮೇಯವಿತ್ತು; ಯಾಕೆಂದರೆ ಹೋಳಿಗೆ ಎಂಬುದು ಮಾರುಕಟ್ಟೆಯಲ್ಲಿ ದೊರೆಯುತ್ತದೆಂದು ಯಾರಿಗೂ ತಿಳಿದಿರಲಿಲ್ಲ. ತಯಾರಿಸುವುದನ್ನಂತೂ ಹೇಗೋ ಮಾಡಬಹುದು, ಆದರೆ ಮಾರುಕಟ್ಟೆಯಲ್ಲಿ ಹೇಗೆ ಎಲ್ಲೆಡೆಗೆ ತಲ್ಪಿಸುವುದು, ಹೇಗೆ ಮಾರುವುದು ಎಂಬುದು ಅವರಿಗಿದ್ದ ಸಮಸ್ಯೆ. ಸಿಹಿತಿನಿಸುಗಳನ್ನು ಮಾರುವ ಬೇಕರಿ, ಕಾಂಡಿಮೆಂಟ್ಸ್ ಮತ್ತು ಸ್ವೀಟ್ ಮಳಿಗೆಗಳವರು ಹೋಳಿಗೆಯನ್ನು ಮಾರಾಟಮಾಡುವುದಕ್ಕೆ ತೀರಾ ಮನಸ್ಸು ಮಾಡುತ್ತಿರಲಿಲ್ಲ. ಅಂತಹ ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೆ ಬೆಂಗಳೂರು ಮಹಾನಗರದ ಹಲವು ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗಳನ್ನು ಸುತ್ತಿ ಹಲವು ಅಂಗಡಿಗಳನ್ನು ಏಜೆಂಟರಾಗುವಂತೆ ಕೇಳಿಕೊಂಡರು. ನಿರಂತರ ನಡೆದ ಈ ಅಭಿಯಾನಕ್ಕೆ ತಕ್ಕಮಟ್ಟಿಗೆ ಫಲಶ್ರುತಿ ದೊರೆಯತೊಡಗಿದಾಗ ಆತ್ಮವಿಶ್ವಾಸ ಹೆಚ್ಚಿತು. ಇದೇ ವೃತ್ತಿಯಲ್ಲಿ ತನ್ನ ಬದುಕನ್ನು ಕಟ್ಟಿಕೊಂಡ ಅವರು ಇಂದು ಹಲವಾರು ಕೈಗಳಿಗೆ ಕೆಲಸ ನೀಡಿದ್ದಾರೆ.


ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು,  ಸಕ್ಕರೆಯ ಬದಲಿಗೆ ಪರಿಶುದ್ಧ ಬೆಲ್ಲ, ಉತ್ತಮ ತೆಂಗಿನಕಾಯಿ, ಬೇಳೆ, ಶೇಂಗಾ, ಖರ್ಜೂರ ಮೊದಲಾದವುಗಳನ್ನು ಬಳಸಿ ಹೋಳಿಗೆಯನ್ನು ತಯಾರಿಸುತ್ತಾರೆ. ’ಭಟ್ ಹೋಳಿಗೆಮನೆ’ಯಲ್ಲಿ ತಯಾರಾಗುವ ಕಜ್ಜಾಯಗಳೂ ಕೂಡ ವಿಶಿಷ್ಟವಾಗಿಯೇ ಇರುತ್ತವೆ. ಒಮ್ಮೆ ’ಭಟ್ ಹೋಳಿಗೆಮನೆ’ಯ ಗ್ರಾಹಕರೊಬ್ಬರ ಮನೆಗೆ ಮುಂಬೈನಿಂದ ನೆಂಟರೊಬ್ಬರು ಬಂದಿದ್ದರಂತೆ; ಮನೆಯಲ್ಲಿ ತಯಾರಿಸಿದ ಸಿಹಿ ತಿನಿಸುಗಳ ಜೊತೆಗೆ ಅವರು ಭಟ್ ಹೋಳಿಗೆಮನೆಯ ಹೋಳಿಗೆಗಳನ್ನೂ ಬಡಿಸಿದರು. ಕಾಯಿ ಹೋಳಿಗೆಯ ರಸದೌತಣವನ್ನು ಮೆದ್ದು ಆನಂದತುಂದಿಲರಾದ ಆ ಅತಿಥಿ ಈಗಲೂ ಮುಂಬೈಗೆ ಹೋಳಿಗೆ ಕಳಿಸುವಂತೆ ಬುಲಾವ್ ಮಾಡುತ್ತಾರಂತೆ.


ಅಂದಹಾಗೆ ಆಗಾಗ ಟಿವಿ ಅಡುಗೆ ಶೋಗಳಲ್ಲಿ ಅನೇಕ ಹೆಂಗಸರು ಹೋಳಿಗೆ ಮಾಡುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಅವರೆಲ್ಲರ ಹೋಳಿಗೆಯನ್ನು ತಿಂದ ಮೇಲೆ ಭಟ್ ಹೋಳಿಗೆಮನೆಯ ಹೋಳಿಗೆಯನ್ನೂ ಒಮ್ಮೆ ತಿಂದು ನೋಡಿ. ಶ್ರೀನಿವಾಸ್ ಅವರ ಹದಪಾಕದ  ಹೋಳಿಗೆಯ ರುಚಿ ಅದ್ಭುತ. ಪರೀಕ್ಷಾರ್ಥವಾಗಿ ನಾವು ಬೆಂಗಳೂರಿನ ವಿವಿಧ ಭಾಗಗಳಲ್ಲಿ ಯಾರ್‍ಯಾರೋ ತಯಾರಿಸುವ ಹೋಳಿಗೆಗಳನ್ನು ಖರೀದಿಸಿ ರುಚಿ ನೋಡಿದ್ದೇವೆ. ಕೆಲವು ಹೈಜೀನಿಕ್ ಆಗಿರದಿದ್ದರೆ ಇನ್ನು ಕೆಲವು ಸಪ್ಪೆ ಸಪ್ಪೆ, ಕೆಲವು ಹಿಟ್ಟಿನ ವಾಸನೆಯಾದರೆ ಇನ್ನೂ ಕೆಲವು ಸರಿಯಾಗಿ ಬೆಂದಿರುವುದಿಲ್ಲ. ಭಟ್ ಹೋಳಿಗೆಯ ಮನೆಯಲ್ಲಿ ಹೋಳಿಗೆ ತಯಾರಾಗುವ ಪ್ರತೀ ಹಂತದಲ್ಲೂ ಅದಕ್ಕೆ ನಿಗದಿತ ಸಮಯ ಮತ್ತು ಸಂಸ್ಕರಣೆಗಳನ್ನು ಅಳವಡಿಸಿಕೊಂಡಿದ್ದಾರೆ. ಯಾವೊಂದು ಹೋಳಿಗೆಯೂ ಅರ್ಧ ಬೆಂದ ಸ್ಥಿತಿಯಲ್ಲೋ ಅಥವಾ ಕಳಪೆ ಗುಣಮಟ್ಟದಿಂದಲೋ ಬಾಧಿತವಾಗಿರುವುದಿಲ್ಲ. ಆಯಾಯ ದಿನಗಳಂದೇ ಫ್ರೆಶ್ ಆಗಿ ಮಾರುಕಟ್ಟೆಗೆ ತಲ್ಪಿಸುವ ಹೊಣೆಗಾರಿಕೆಯನ್ನೂ ನಿರ್ವಹಿಸುವ ಶ್ರೀನಿವಾಸ್ ಅವರು, ತಮ್ಮ ತಯಾರಿಕೆಯ ಯಾವುದೇ ತಿನಿಸುಗಳಿಗೆ, ಅನೇಕ ದಿನಗಳ ವರೆಗೆ ಕೆಡದಂತೆ ಸಂರಕ್ಷಿಸಲು ಬಳಸುವ ಯಾವುದೇ ರಾಸಾಯನಿಕಗಳನ್ನೂ ಸಹ ಉಪಯೋಗಿಸುವುದಿಲ್ಲ.  "ಇಂದೇ ಡ್ರಾ ಇಂದೇ ಬಹುಮಾನ" ಎಂಬಂತೆ ಅವತ್ತಿನ ದಿನದ ತಯಾರಿಕೆ ಅವತ್ತೇ ಮಾರುಕಟ್ಟೆಯನ್ನು ತಲ್ಪುವ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.


ಹೋಳಿಗೆಯನ್ನು ಕೇವಲ ಯುಗಾದಿಗೊಮ್ಮೆ ನೆನಪಿಸಿಕೊಳ್ಳುತ್ತಿದ್ದ ಅನೇಕರು ಇಂದು ವೀಕೆಂಡ್‍ಗಳಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ, ಬಫೆಗಳಿಗೆ, ನಾಮಕರಣ-ಬರ್ತ್ ಡೇ ಮೊದಲಾದ ಕಾರ್ಯಕ್ರಮಗಳಿಗೆ ಭಟ್ ಹೋಳಿಗೆಯ ಮೊರೆ ಹೋಗುತ್ತಿರುವುದನ್ನು ಗಮನಿಸಿದರೆ ಹೋಳಿಗೆಯ ರುಚಿ ಹತ್ತಿಸುವ ಕಲೆ ಶ್ರೀನಿವಾಸರಿಗೆ ಕರಗತವಾಗಿದೆ ಎನ್ನಬಹುದು. ಕಥೆ ಕೇಳುವುದರಿಂದ ನಿಮಗೆ ತಿಂದಷ್ಟು ಮಜಾ ಸಿಗುವುದೇ? ರುಚಿ ಎಂಬುದನ್ನು ಕೇವಲ ಅಕ್ಷರಗಳಲ್ಲಿ ಎಷ್ಟೆಂದು ಬಣ್ಣಿಸಲಾದೀತು? ಇದನ್ನು ನೇರಾ ನೇರ ಅನುಭವಿಸಬೇಕೆಂದರೆ ಈಗಲೇ ನೀವೊಮ್ಮೆ ಭಟ್ ಹೋಳಿಗೆಯನ್ನು ತಿಂದು ನೋಡಬೇಕು. ಎಲ್ಲದಕ್ಕೂ "ಪ್ರೆಸ್ ಒನ್ ಫಾರ್ ಸೇಲ್ಸ್, ಪ್ರೆಸ್ ಠೂ ಫಾರ್ ಪ್ಲಾನ್ಸ್....ಪ್ರೆಸ್ ನೈನ್ ಟೊ ಟಾಕ್ ಟು ಅವರ್ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್’ ಎಂಬ ಕಾಲ್ ಸೆಂಟರ್ ಯುಗದಲ್ಲಿ, ನೇರವಾಗಿ ದೂರವಾಣಿಗೆ ಸಿಗುವ, ದೇಶೀಯ ಸ್ವಾದಿಷ್ಟ, ಪೌಷ್ಟಿಕ, ನೈಸರ್ಗಿಕವಾಗಿ ತಯಾರಿಸಲ್ಪಟ್ಟ ತಿನಿಸುಗಳನ್ನು ತಯಾರಿಸುವ ಶ್ರೀನಿವಾಸ್ ಅವರಂಥವರ ಕೆಲಸ ನಿಜಕ್ಕೂ ಶ್ಲಾಘ್ಯ.


ಭಟ್ ಹೋಳಿಗೆ ಮನೆಯ ಸಂಪರ್ಕ ಮತ್ತು ವಿಳಾಸ ಇಂತಿದೆ:
ಭಟ್ ಹೋಳಿಗೆಮನೆ,
# 8,.[ಹೊಸ ನಂ.27, 8ನೇ ಮುಖ್ಯರಸ್ತೆ, ಮಹಾಬಲೇಶ್ವರ ದೇವಸ್ಥಾನದ ಹತ್ತಿರ, ಗಣೇಶ ಬ್ಲಾಕ್, ಮಹಾಲಕ್ಷ್ಮಿ ಲೇ ಔಟ್, ಬೆಂಗಳೂರು-560096
ಚರದೂರವಾಣಿ: 9901427992   ಸ್ಥಿರದೂರವಾಣಿ:080-23490959
ಈ ಮೇಲ್ : srinivasyadu@gmail.com